ಕನ್ನಡ ಉಳಿಸುವುದು ಹೇಗೆ?

Chanda Marutha

Administrator
Staff member
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರು ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಕು. ವನಿತಾ ಸ್ಮಾರಕ ರಾಜ್ಯ ಮಟ್ಟದ ಅಂತರ ಕಾಲೇಜು ಕನ್ನಡ ಚರ್ಚಾಸ್ಪರ್ಧೆ ನಡೆಯಿತು. ಇಲ್ಲಿ ನಡೆದದ್ದು ಅಕ್ಷರಶಃ ಅಂತರ ಕಾಲೇಜು ಕನ್ನಡ ಚರ್ಚಾಸ್ಪರ್ಧೆ. ಇಂಗ್ಲಿಷ್ ಚರ್ಚಾಸ್ಪರ್ಧೆಯಲ್ಲ. ಕರ್ನಾಟಕದ ಸುಮಾರು ೧೦೦ ಕಾಲೇಜುಗಳ ೨೦೦ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡ ಬೃಹತ್ ಸ್ಪರ್ಧೆ ಅದು. ಆದರೆ, ಸ್ಪರ್ಧೆಯಲ್ಲಿ ಮಾತನಾಡಿದ ಶೇಕಡ ೯೯ರಷ್ಟು ಯುವಕ, ಯುವತಿಯರು ಆಂಗ್ಲ ಪದ ಬಳಸದೆ ೪ ನಿಮಿಷ ಸ್ವಚ್ಛ, ಅಚ್ಚ ಕನ್ನಡದಲ್ಲಿ ಮಾತನಾಡಲಿಲ್ಲ. ಕೆಲವರಂತೂ ಕನ್ನಡ - ಇಂಗ್ಲಿಷ್ ಬೆರೆಸಿದ ಕಂಗ್ಲಿಷ್‌ನಲ್ಲೇ ತಮ್ಮ ವಾದ ಮಂಡಿಸಿದರು.

ಮೌಲ್ಯ ರಹಿತ ಶಿಕ್ಷಣ ವ್ಯವಸ್ಥೆಯೇ ದೇಶದ ಪ್ರಸ್ತುತ ವಿಷಮ ಸ್ಥಿತಿಗೆ ಕಾರಣ ಎಂಬ ವಿಷಯದ ಬಗ್ಗೆ ಮಾತನಾಡಿದ ಒಂದು ಹುಡುಗಿ ತನ್ನ ಚರ್ಚೆಯನ್ನು ಮಂಡಿಸಿದ್ದು ಹೀಗೆ.... ಅಧ್ಯಕ್ಷರೆ ತೀರ್ಪುಗಾರರೆ, ಇಂದು ವ್ಯಾಲ್ಯೂಯಬಲ್ ಅಂಡ್ ವ್ಯಾಲ್ಯೂ ಆಡೆಡ್ ಎಡ್ಯುಕೇಷನ್ ನಮಗೆ ಸಿಕ್ತಾ ಇಲ್ಲ. ಸೋ.. ವಿ ಆರ್ ಫೇಸಿಂಗ್ ಹಲವಾರು ಪ್ರಾಬ್ಲಂಸ್, ನಮ್ಮ ಕಂಟ್ರಿ ಇವತ್ತು ಕ್ರೂಷಿಯಲ್ ಸ್ಟೇಜ್‌ನಲ್ಲಿದೆ. ಹೀಗಾಗಿ ನಾವು ಗುಡ್ ಎಡ್ಯುಕೇಷನ್ ಬಗ್ಗೆ ಏಮ್ ಮಾಡಬೇಕು. ಇಲ್ಲ ಅಂದ್ರೆ, ನಮ್ಮ ದೇಶ ಬಿಲ್‌ಕುಲ್ ಪ್ರೋಗ್ರೆಸ್ ಆಗತ್ತ. ತುಂಬಾ ಪ್ರಾಂಬ್ಲಂ ಫೇಸ್ ಮಾಡಬೇಕಾಗತ್ತೆ... ಇದನ್ನು ಕನ್ನಡ ಚರ್ಚಾ ಸ್ಪರ್ಧೆ ಎನ್ನಬೇಕೋ.. ಇಲ್ಲ ಇಂಗ್ಲಿಷ್ ಚರ್ಚಾ ಸ್ಪರ್ಧೆ ಎನ್ನಬೇಕೋ ಇಲ್ಲವೇ ದ್ವಿಭಾಷಾ, ತ್ರಿಭಾಷಾ, ಬಹುಭಾಷಾ ಚರ್ಚಾ ಸ್ಪರ್ಧೆ ಎನ್ನಬೇಕೋ ತಿಳಿಯದಾಗಿತ್ತು.

ನಮ್ಮ ಇಂದಿನ ಯುವಕ ಯುವತಿಯರು ಮಾತಾಡೋದೇ ಹೀಗೆ. ಇದಕ್ಕೆ ಕೆಲವು ದೃಶ್ಯ ಮಾಧ್ಯಮಗಳು ನೀಡಿರುವ ಕೊಡುಗೆಯೂ ಕಡಿಮೆ ಏನಲ್ಲ. ಇದು ಹೀಗೇ ಮುಂದುವರಿದರೆ ಕನ್ನಡವನ್ನು ಹುಡುಕಬೇಕಾದ ಸ್ಥಿತಿ ಬಂದರೂ ಅಚ್ಚರಿ ಇಲ್ಲ.

ಇಂಥ ಸನ್ನಿವೇಶನವನ್ನು ಹಗುರವಾಗಿ ಪರಿಗಣಿಸುವುದು ಖಂಡಿತಾ ಸಲ್ಲ. ಕನ್ನಡ ಉಳಿಯಬೇಕಾದರೆ ಏನು ಮಾಡಬೇಕು ಎಂಬ ಬಗ್ಗೆ ಗಂಭೀರ ಚಿಂತನೆ ಅತ್ಯಗತ್ಯ ಹಾಗೂ ಅನಿವಾರ್ಯ. ಸಾಹಿತ್ಯ ಸಮ್ಮೇಳನಗಳಲ್ಲಿ, ಕನ್ನಡ ಸಮಾವೇಶಗಳಲ್ಲಿ ಶಂಖ ಊದಿದ ಮಾತ್ರಕ್ಕೆ, ರಾಜ್ಯೋತ್ಸವ ಮಾಸದಲ್ಲಿ ಅಬ್ಬರದ ಧ್ವನಿವರ್ಧಕ ಹಾಕಿ ಕನ್ನಡ ಕನ್ನಡ ಎಂದು ಭಾಷಣ ಮಾಡಿದ ಮಾತ್ರಕ್ಕೆ, ಮೈ ಮೇಲೆ ಕರ್ನಾಟಕ ಚಿತ್ರ ಬರೆಸಿಕೊಂಡು, ಕೈಯಲ್ಲಿ ಹಳದಿ - ಕೆಂಪು ಬಣ್ಣದ ಧ್ವಜ ಹಿಡಿದು ಅತ್ತಿಂದಿತ್ತ, ಇತ್ತಿಂದತ್ತ ಆಡಿಸಿದ ಮಾತ್ರಕ್ಕೆ ಕನ್ನಡ ಉಳಿಯಲು ಸಾಧ್ಯವಿಲ್ಲ.

ಇಂದು ಎಲ್ಲ ಪಾಲಕರೂ ತಾವಂತೂ ಇಂಗ್ಲಿಷ್ ಕಲಿಯಲಿಲ್ಲ. ತಮ್ಮ ಮಕ್ಕಳಾದರೂ ಕಲಿಯಲಿ ಎಂದು ಕಾನ್ವೆಂಟ್ ಶಾಲೆಗಳಿಗೆ ಸೇರಿಸುತ್ತಾರೆ. ಇಂಥ ಶಾಲೆಗಳಲ್ಲಿ ಕನ್ನಡ ಮಾತನಾಡಿದರೆ ದಂಡ ವಿಧಿಸುವ ಸ್ಥಿತಿಯೂ ಇದೆ. ಹೀಗಾಗಿ ಮಕ್ಕಳು ಶಾಲೆಯಲ್ಲಿ ಅಪ್ಪಿ ತಪ್ಪಿಯೂ ಕನ್ನಡ ಮಾತನಾಡುವುದಿಲ್ಲ. ಇನ್ನು ಮನೆಯಲ್ಲೂ ತಂದೆ ತಾಯಿ, ಅಣ್ಣ ತಮ್ಮ ಎಲ್ಲರೂ ಇಂಗ್ಲಿಷ್‌ನಲ್ಲೇ ವ್ಯವಹರಿಸಿದರೆ, ಮಕ್ಕಳು ಕನ್ನಡ ಕಲಿಯುವುದಾದರೂ ಎಂತು. ಹಾಗಿಗೇ ಮನೆಯೆ ಮೊದಲ ಪಾಠ ಶಾಲೆ, ಜನನಿ ತಾನೆ ಮೊದಲ ಗುರುವು ಜನನಿಯಿಂದ ಪಾಠ ಕಲಿತ ಜನರು ಧನ್ಯರು ಎನ್ನುವಂತೆ. ಮನೆಯಿಂದಲೇ ಕನ್ನಡ ಪಾಠ ಆರಂಭವಾಗಬೇಕು. ಮನೆಯಲ್ಲಿ ಕನ್ನಡ ವಾತಾವರಣ ನಿರ್ಮಾಣವಾಗಬೇಕು. ಇಲ್ಲವಾದರೆ ಕನ್ನಡ ಎಂದರೆ ಎನ್ನಡ ಎನ್ನುವ ಸ್ಥಿತಿ ನಿರ್ಮಾಣವಾದರೂ ಅಚ್ಚರಿ ಇಲ್ಲ.

ಬೆಂಗಳೂರಿನಲ್ಲಿ ನೀವು ಗಮನಿಸಿರಬಹುದು. ಇಬ್ಬರು ತಮಿಳಿನವರು ಸೇರಿದರೆ ಅವರು ತಮಿಳಿನಲ್ಲೇ ಮಾತನಾಡುತ್ತಾರೆ. ತೆಲುಗಿನವರು ಸಿಕ್ಕರೆ ತೆಲುಗಲ್ಲೇ ಮಾತನಾಡುತ್ತಾರೆ. ಮಾರವಾಡಿಗಳು ರಾಜಸ್ಥಾನಿ ಭಾಷೆಯಲ್ಲೇ ವ್ಯವಹರಿಸುತ್ತಾರೆ. ಉತ್ತರ ಭಾರತೀಯರು ಹಿಂದಿಯಲ್ಲಿ ಮಾತನಾಡುತ್ತಾರೆ. ಆದರೆ ನಮ್ಮವರು ಇಲ್ಲಿಯೇ ಇರಲಿ, ಹೊರಗಡೆಯೇ ಇರಲಿ ಅವರ ಭಾಷೆ ಕಲಿತು ಅವರೊಂದಿಗೆ ಅವರ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ. ಅವರಿಗೆ ಕನ್ನಡ ಕಲಿಸುವ ಬದಲು ತಾವೇ ಅವರ ಭಾಷೆ ಕಲಿಯುತ್ತಾರೆ. ನಮ್ಮಲ್ಲಿ ಕೆಲವರಿಗೆ ಕನ್ನಡ ಮಾತನಾಡುವುದು ಅವಮಾನದ ಸಂಗತಿಯಾಗಿದೆ.

ನಮ್ಮ ಭಾಷೆ ಕನ್ನಡ ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದು ಎನ್ನುವ ಅಭಿಮಾನ ನಮ್ಮವರಲ್ಲಿ ಇಲ್ಲ. ಕನ್ನಡ ವಾಸ್ತವವಾಗಿ ಇಂಗ್ಲಿಷ್ ಭಾಷೆಗಿಂತ ಪ್ರಾಚೀನವಾದ್ದು. ಸಾಹಿತ್ಯಿಕವಾಗಿ ಶ್ರೀಮಂತವಾದ್ದು. ಹೀಗಾಗಿಯೇ ಅನ್ಯ ಭಾಷೆಯ ಹೊಡೆತದ ನಡುವೆಯೂ ಕನ್ನಡ ಇನ್ನೂ ಜೀವಂತವಾಗಿದೆ. ಹಾಗೆಂದು ನಾವು ಈಗಲೂ ನಮ್ಮ ಭಾಷೆಯನ್ನೇ ಉಪೇಕ್ಷಿಸಿದರೆ ಕನ್ನಡಕ್ಕೆ ಹೊಡೆತ ತಪ್ಪಿದ್ದಲ್ಲ ಎನ್ನುವ ಎಚ್ಚರ, ಅರಿವೂ ನಮಗಿರಬೇಕು.

ಇಂದು ಜಗತ್ತಿನ ಹಲವು ಭಾಷೆಗಳು ಇಂಗ್ಲಿಷ್ ಹೊಡೆತಕ್ಕೆ ಸಿಲುಕಿ ವಿನಾಶದ ಅಂಚು ತಲುಪಿವೆ. ಭಾಷಾ ಶಾಸ್ತ್ರಜ್ಞರ ರೀತ್ಯ ಪರಿಸ್ಥಿತಿ ಹೀಗೇ ಮುಂದುವರಿದರೆ ವಿಶ್ವದ ೬ ಸಾವಿರ ಭಾಷೆಗಳ ಪೈಕಿ ಶೇಕಡ ೮೦ರಷ್ಟು ಭಾಷೆಗಳು ಮುಂದಿನ ಒಂದು ಶತಮಾನದಲ್ಲಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯೂ ಇದೆ. ಇದಕ್ಕೆ ಕನ್ನಡವೂ ಹೊರತಾಗಿಲ್ಲ. ಆದರೆ ಇಂದು ಕನ್ನಡ ಅಂಕಿಗಳ ಬಳಕೆ ಬಹುತೇಕ ಇಲ್ಲವೇ ಸಂಪೂರ್ಣ ನಿಂತು ಹೋಗಿದೆ. ಕನ್ನಡ ಅಂಕಿಗೆ ಬಂದ ಸ್ಥಿತಿ ಕನ್ನಡಕ್ಕೂ ಬರಬಾರದಲ್ಲವೇ.

ಹೀಗಾಗಿ ಕನ್ನಡ ಉಳಿಯಬೇಕಾಗದೆ ನಾವೇನು ಮಾಡಬೇಕು. ಅದಕ್ಕೆ ಉತ್ತರವೂ ನಮ್ಮಲ್ಲೇ ಇದೆ. ನಾವು ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಬೇಕು. ಬೆಳೆಸಬೇಕು. ಅನಗತ್ಯವಾಗಿ ಅನಾವಶ್ಯಕವಾಗಿ ಅನ್ಯಭಾಷೆ ಪಯೋಗಿಸಬಾರದು. ನಮ್ಮ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ಕಡ್ಡಾಯವಾಗಿ ಕನ್ನಡದಲ್ಲೇ ಆಗಬೇಕು. ಮಕ್ಕಳೊಂದಿಗೆ ಸ್ವಚ್ಛ ಕನ್ನಡದಲ್ಲಿ ಮಾತನಾಡುವ, ತಪ್ಪಿಲ್ಲದೆ ಕನ್ನಡ ಬರೆಯುವ ಬಗ್ಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮೊದಲು ತರಬೇತಿ ನೀಡಬೇಕು. ಪ್ರಾಥಮಿಕ ಹಂತದಲ್ಲಿ ಕನ್ನಡವನ್ನು ಭದ್ರವಾಗಿ ನೆಲೆಯೂರುವಂತೆ ಮಾಡಬೇಕು. ಇಂದು ರಾಜ್ಯದಲ್ಲಿರುವ ಬಿ.ಎಡ್ ಹಾಗೂ ಡಿಎಡ್ ಕಾಲೇಜುಗಳಿಗೆ ಹೆಚ್ಚಾಗಿ ಕೇರಳದಿಂದ ವಿದ್ಯಾರ್ಥಿಗಳು ಬಂದು ಸೇರುತ್ತಿದ್ದಾರೆ. ಅವರು ಇಲ್ಲಿಯೇ ಪದವಿ ಪಡೆದು ನಮ್ಮ ರಾಜ್ಯದ ಕಾನ್ವೆಂಟ್ ಶಾಲೆಗಳಲ್ಲಿ ಶಿಕ್ಷಕರಾಗಿ ಸೇರುತ್ತಾರೆ. ಹೀಗಾಗಿ ಕನ್ನಡಿಗರು ಬೋಧನೆಯಿಂದ ದೂರವಾಗುತ್ತಿದ್ದಾರೆ. ಇದು ಕನ್ನಡ ತನ ಶಾಲಾ ಮಟ್ಟದಲ್ಲಿ ಕಣ್ಮರೆಯಾಗಲು ಕಾರಣವಾಗುತ್ತಿದೆ. ದಸರಾ ಬೊಂಬೆ ಹಬ್ಬ ಕಣ್ಮರೆಯಾಗಿ, ಓಣಂ ಆಚರಣೆ ಹೆಚ್ಚಾಗುತ್ತಿದೆ. ಇದು ನಮ್ಮ ಸಂಸ್ಕೃತಿಯ ಮೇಲೂ ಆಗುತ್ತಿರುವ ದಾಳಿ ಅಲ್ಲವೇ. ಈ ಬಗ್ಗೆ ಚಿಂತಿಸುವವರಾರು.

ತಮಿಳುನಾಡಿನಲ್ಲಿರುವ ಆ ರಾಜ್ಯದ ಲೋಕಸೇವಾ ಆಯೋಗದಲ್ಲಿ ಸಂದರ್ಶನ ನಡೆಯುವುದೇ ತಮಿಳಿನಲ್ಲಿ. ಹೀಗಾಗಿ ಅಲ್ಲಿ ಸರ್ಕಾರಿ ಕೆಲಸಕ್ಕೆ ಸೇರುವವರು ತಮಿಳು ಭಾಷಿಕರೇ ಆಗುತ್ತಾರೆ. ಆದರೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಕನ್ನಡದಲ್ಲಿ ಸಂದರ್ಶನವೇ ನಡೆಯುವುದಿಲ್ಲ. ಹೀಗಾಗೇ ರಾಜ್ಯ ಸರ್ಕಾರದ ಕಚೇರಿಗಳಲ್ಲೂ ಅನ್ಯಭಾಷಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಜ್ಯದಲ್ಲೇ ಕನ್ನಡ ವಾತಾವರಣ ಮರೆಯಾಗುತ್ತಿದೆ.ಈ ನಿಟ್ಟಿನಲ್ಲಿ ಪಾಲಕರು, ಕನ್ನಡ ಪರ ಚಿಂತಕರು, ಸರ್ಕಾರಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಸ್ಕೃತಿ ಇಲಾಖೆ ಎಲ್ಲವೂ ಚಿಂತಿಸುವ ಹಾಗೂ ರಾಜ್ಯದ ಖಾಸಗಿ ಶಾಲೆಗಳಲ್ಲಿ ಕನ್ನಡ ವಾತಾವರಣ ಮೂಡಿಸುವ ಕೆಲಸ ಮಾಡಬೇಕು. ಇಲ್ಲವಾದರೆ ಕನ್ನಡದ ಪದಗಳ ಬಳಕೆಯೇ ಕಡಿಮೆಯಾಗುವ ಅಪಾಯ ಇಲ್ಲದಿಲ್ಲ
 
Top