Dr. Rajkumar - Annavru, Karnataka Ratna, Kentucky Colonel, Padma Bhushan, Nata Saarvabhouma

Vishwas Mysuru

aDDa Junior
*ಅಂದು ರಸ್ತೆಯಲ್ಲಿ ಸಿಕ್ಕ ವೇಶ್ಯೆಯರನ್ನು ನೋಡಿ ಮರುಗಿದ್ದ ಅಣ್ಣಾವ್ರು ಮಾಡಿದ್ದೇನು ? ಇದು ಎಲ್ಲರೂ ತಿಳಿಯಬೇಕಾದ ವಿಷಯ. ಮರೆಯದೆ ಓದಿ..*

" ನಿಜವಾಗಿಯೂ *ಶಕ್ತಿಧಾಮ* ಕೇವಲ ಒಂದು ಸಂಸ್ಥೆಯಲ್ಲ. ಅದು ಡಾ.ರಾಜ್ ಕುಮಾರ್ ಹಾಗೂ ಅವರ ಕುಟುಂಬದವರ ಉದಾರ ಹಾಗೂ ಮಾನವೀಯ ಗುಣದ ಒಂದು ನಿದರ್ಶನವಷ್ಟೆ."

ಶೋಷಿತ ಮಹಿಳೆಯರ ಏಳಿಗೆ, ಶೋಷಿತ ಮಹಿಳೆಯರ ಕಲ್ಯಾಣ, ಕಷ್ಟಗಳಿಗೆ ರೋಸಿ ಹೋದ ಮಹಿಳೆಯರಿಗೆ ಜೀವನೋಪಾಯ ಕಲ್ಪಿಸುವುದು ಹೀಗೆ ಉದ್ದುದ್ದ ಭಾಷಣ ಮಾಡುವ ನಾಯಕರನ್ನು, ಸಮಾಜ ಸುಧಾರಕರನ್ನು ನಾವು ನೋಡಿದ್ದೇವೆ. ಆದರೆ ಅಂತಹ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ, ಪಬ್ಲಿಸಿಟಿಗಾಗಿ ದುಡಿಯದೆ, ನಿಜವಾದ ಸೇವಾ ಮನೋಭಾವದಿಂದ ಕಳೆದ ಇಪ್ಪತ್ತು ವರ್ಷಗಳಿಂದ ಸೇವೆ ಮಾಡುತ್ತಿರುವ ಒಂದು ಸಂಸ್ಥೆ ನಮ್ಮ ರಾಜ್ಯದಲ್ಲಿದ್ದು, ಆ ಸಂಸ್ಥೆಯ ಸ್ಥಾಪನೆಯ ಹಿಂದೆ ಇರುವ ಮಾನವೀಯ ಆಲೋಚನೆಯ ಕರ್ತೃ, ಕ್ರಿಯಾ ಹಾಗೂ ಕರ್ಮ ಯಾರೆಂಬುದನ್ನು ತಿಳಿದರೆ, ನಿಜವಾಗಿಯೂ ನಾವು ಪುಳಕಿತಗೊಳ್ಳುತ್ತೇವೆ. ಮೈ ರೋಮಾಂಚನಗೊಳ್ಳುತ್ತದೆ ಹಾಗೂ ಆ ಸಂಸ್ಥೆಯ ಸ್ಥಾಪನೆಗೆ ಕಾರಣರಾದ ಆ ಪುಣ್ಯ ಪುರುಷನ ಇಡೀ ಕುಟುಂಬಕ್ಕೆ ಕೈ ಮುಗಿದು, ನಮಿಸಬೇಕು ಎನಿಸುತ್ತದೆ.
ಹಾಗಾದರೆ ಬನ್ನಿ ಆ ಮಹೋನ್ನತ ಸಂಸ್ಥೆ ಹಾಗೂ ಅದರ ಸ್ಥಾಪನೆಯ ಹಿನ್ನೆಲೆಯನ್ನು ನಾವು ತಿಳಿಯೋಣ.

ನಾವು ಸಂಸ್ಥೆಯ ಬಗ್ಗೆ ತಿಳಿಯುವ ಮೊದಲು ಇದರ ಹಿಂದಿನ ಅಂದರೆ ಈ ಸಂಸ್ಥೆಯ ಹುಟ್ಟು ಹೇಗಾಯಿತೆಂಬುದನ್ನೊಮ್ಮೆ ನೋಡೋಣ. ಕನ್ನಡ ಚಿತ್ರರಂಗದ ಮೇರು ನಟರಲ್ಲಿ ಒಬ್ಬರಾದ , ಕನ್ನಡ ನಾಡ ಕೋಟ್ಯಂತರ ಅಭಿಮಾನಿಗಳ ಹೃದಯ ದೇಗುಲದಲ್ಲಿ ಆರಾಧ್ಯ ದೈವದಂತೆ ನೆಲೆಸಿರುವ , ಕರುಣಾಳು, ಸಹೃದಯಿ, ತನ್ನ ನಟನೆಯಿಂದ ಚಂಡ ಪ್ರಚಂಡರನ್ನು ಕಣ್ಮಂದೆ ತಂದು ನಿಲ್ಲಿಸಿಬಿಡುತ್ತಿದ್ದ, ಸರಳತೆಯೇ ಜೀವಾಳವೆಂಬಂತೆ ಬದುಕಿದ, ನಟ ಸಾರ್ವಭೌಮ ಡಾ.ರಾಜ್‍ಕುಮಾರ್ ಅವರು ನಮಗೆಲ್ಲಾ ತಿಳಿದಿರುವ ವಿಷಯ. ಆದರೆ ಇದೇ ವರನಟ ನಿಜವಾಗಿಯೂ, ಸಾವಿರಾರು ಹೆಣ್ಣುಮಕ್ಕಳ ಜೀವನಕ್ಕೆ ದಾರಿ ಕಲ್ಪಿಸುವ , ನೊಂದ ಹೆಣ್ಣುಮಕ್ಕಳ ಜೀವನಕ್ಕೆ ಆಶಾಕಿರಣವಾಗಿರುವ , ಜೀವನ ನಿರ್ವಹಣೆಗಾಗಿ ರಸ್ತೆಗಿಳಿದ ಹೆಣ್ಣುಗಳಿಗೆ ಸ್ವಾಭಿಮಾನದ ಹಾಗೂ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವ ಅವಕಾಶ ಕಲ್ಪಿಸಿದ ಮಹಾಪುರುಷ. ಡಾ.ರಾಜ್ ಅವರು ಅನೇಕ ಸಮಾಜ ಮುಖಿ ಕೆಲಸಗಳನ್ನು , ಹಲವರಿಗೆ ಹಲವು ರೀತಿಯ ಸಹಾಯಗಳನ್ನು ಮಾಡಿದ್ದಾರೆಂದು ನಾವೆಲ್ಲಾ ತಿಳಿದಿದ್ದೇವೆ. ಆದರೆ ಈಗ ಹೇಳಲು ಹೊರಟಿರುವ ಸಂಸ್ಥೆಯ ವಿಷಯ ಕೇಳಿದ ಮೇಲೆ ಡಾ.ರಾಜ್ ಅವರು ದೇವತಾ ಮನುಷ್ಯನಂತೆ ಕಾಣದೇ ಇರಲಾರರು.

ಡಾ.ರಾಜ್‍ಕುಮಾರ್ ದೇಶಕಂಡ ಅದ್ಬುತ ನಟರಲ್ಲಿ ಒಬ್ಬರು‌. ಇನ್ನು ಕರ್ನಾಟಕದ ಜನರ ಪಾಲಿಗೆ ಅವರು ಕನ್ನಡ ಚಿತ್ರರಂಗದ ನಟ ವಿರಾಟ್. ಅಣ್ಣಾವ್ರೆಂದೇ ಖ್ಯಾತನಾಮರು. ಅವರು ಯಾವುದಾದರೂ ಊರಿಗೆ ಬಂದಿದ್ದಾರೆ ಎಂದು ಗೊತ್ತಾದರೆ, ಅವರನ್ನು ನೋಡಿ ಕಣ್ತುಂಬಿಕೊಳ್ಳಲು ಜನ ಸಾಗರವೇ ಸೇರುತ್ತಿತ್ತು. ಅಷ್ಟು ಅಭಿಮಾನ ನಮಗೆ. ಅಣ್ಣಾವ್ರು ಒಬ್ಬ ನಟ ಎಂಬುದು ಮನಸ್ಸಿಗೆ ಗೊತ್ತು, ಆದರೆ ಅದನ್ನು ಮೀರಿದ ಯಾವುದೋ ಶಕ್ತಿ, ಜನರನ್ನು ಅವರತ್ತ ಆಕರ್ಷಿಸುತ್ತಿತ್ತು. ಅದೇ ಆ ವರನಟನ, ನಟ ಸಾರ್ವಭೌಮನ ಸರಳತೆ ಹಾಗೂ ಸೌಮ್ಯತೆ. ಅಣ್ಣಾವ್ರು ಕೂಡಾ ಸಾಕಷ್ಟು ಹೊರಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ತಾ ಇರಲಿಲ್ಲ.‌ಕಾರಣ ಜನಜಂಗುಳಿಯ ನಿಯಂತ್ರಣ ಅಸಾಧ್ಯ ಎಂದು. ಆದರೂ ಅವರ ನೆಚ್ಚಿನ ಮೈಸೂರನ್ನು ಮಾತ್ರ ಅವರಿಗೆ ನೋಡದೆ ಇರಲಾಗುತ್ತಿರಲಿಲ್ಲ. ಆದ್ದರಿಂದ ಆಗಾಗ ಮೈಸೂರಿಗೆ ಹೋಗುತ್ತಿದ್ದರು‌. ಆದರೆ ಜನರಿಗೆ ತೊಂದರೆ ನೀಡಬಾರದೆಂಬ ಕಾಳಜಿಯಿಂದ ಬಹುತೇಕ ರಾತ್ರಿ ವೇಳೆಯಲ್ಲಿ, ಮೈಸೂರಿನ ರಸ್ತೆಗಳಲ್ಲಿ, ಅಂದಿನ ಕಮೀಷನರ್ ಆದ ಕೆಂಪಯ್ಯನವರ ಜೊತೆ ಸುತ್ತಾಡುತ್ತಿದ್ದರು. ಹಾಗೆ ಸುತ್ತಾಡಲು ಹೋದ ಒಂದು ಸಂದರ್ಭ ಮಹಿಳೆಯರ ಪಾಲಿಗೆ ವರವಾಯಿತು. ಅಣ್ಣಾವ್ರು ಅಸಹಾಯಕ ಮಹಿಳೆಯರ ಶಕ್ತಿಯಾದರು.

ಒಮ್ಮೆ ಮೈಸೂರಿನಲ್ಲಿ ತಡರಾತ್ರಿಯಲ್ಲಿ ವರನಟರು, ಕಮೀಷನರ್ ಕೆಂಪಯ್ಯನವರೊಂದಿಗೆ ಕಾರಿನಲ್ಲಿ ಹೋಗುವಾಗ ರಸ್ತೆಯ ಬದಿಗಳಲ್ಲಿ ಹೆಂಗಸರು ನಿಂತಿರುವುದನ್ನು ನೋಡಿ, ಅದರ ಬಗ್ಗೆ ಕೆಂಪಯ್ಯನವರನ್ನು ಪ್ರಶ್ನಿಸಿದ್ದಾರೆ. ಆದ ಕೆಂಪಯ್ಯನವರು ಅವರಿಗೆ ಅವರೆಲ್ಲಾ ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಹೆಂಗಸರೆಂದು, ಹಿಡಿದ ದಂಡ ವಿಧಿಸಿದರೆ, ಮತ್ತೆ ದಂಡ ಪಾವತಿಸಲು ಅವರು ಅದೇ ದಂಧೆ ಮಾಡಬೇಕಾದ ಪರಿಸ್ಥಿತಿ ಎಂದು ಹೇಳಿದಾಗ, ಅಣ್ಣಾವ್ರ ಮನಸ್ಸಿಗೆ ಏನನ್ನಿಸುತೋ, ಅವರ ಅತಃಕರಣ ಮಿಡಿದಿದೆ, ಅಂದು ಅವರು ತೆಗೆದುಕೊಂಡ ನಿರ್ಧಾರ ಅಂತಹ ಮಹಿಳೆಯರಿಗೆ ಉತ್ತಮ ಜೀವನ ಹಾಗೂ ಸ್ವಾವಲಂಬಿ‌ ಬದುಕನ್ನು ಕಟ್ಟಿಕೊಡುವುದು. ಕೂಡಲೇ ಕಾರ್ಯ ಪ್ರವೃತ್ತರಾದ ಅವರು ದೇವನೂರು ಮಹಾದೇವ, ಡಾ.ಜಿ‌.ಎಸ್.ಶಿವರುದ್ರಪ್ಪ ನವರಂತಹ ಗಣ್ಯರೊಡನೆ ಚರ್ಚಿಸಿ, ಸಮಾಲೋಚಿಸಿ ಮಾಡಿದ ಆಲೋಚನೆಯೇ ಒಂದು ಸೇವಾ ಸಂಸ್ಥೆಯ ಹುಟ್ಟಿಗೆ ಕಾರಣವಾಗಿ ಹೋಯ್ತು. ಡಾ. ರಾಜ್ ಕುಮಾರ್ ಅವರು ಒಂದು ರಸಸಂಜೆ ಕಾರ್ಯಕ್ರಮ ಆಯೋಜಿಸಿ ಅದರಿಂದ ಗಳಿಸಿದ ಹಣ, ಇನ್ಫೋಸಿಸ್ ಸುಧಾ ಮೂರ್ತಿ ಅವರ ಧನ ಸಹಾಯದಿಂದ ಅಣ್ಣಾವ್ರ ಕನಸು ನನಸಾಯಿತು. ಅವರ ಕನಸಿನ ಮಹಿಳೆಯರ ಆಶ್ರಯ ಸ್ಥಾನ “ಶಕ್ತಿಧಾಮ” ವಾಗಿ ಸಾಕಾರವಾಯಿತು.

ಸಂಸ್ಥೆಯ ಮೊದಲ ಸಂಸ್ಥಾಪಕ ಅಧ್ಯಕ್ಷರಾಗಿ ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್ ಅವರನ್ನು ನೇಮಿಸಲಾಯಿತು. ಅಲ್ಲಿಂದ ಶಕ್ತಿಧಾಮ ಇತಿಹಾಸ ಸೃಷ್ಟಿಸಿತು. ವೇಶ್ಯಾ ವಾಟಿಕೆಯಲ್ಲಿ ತೊಡಗಿದ್ದ ಅಸಹಾಯಕ ಹೆಂಗಸರನ್ನು ಶಕ್ತಿಧಾಮಕ್ಕೆ ಕರೆತಂದು ಅವರಿಗೆ ಉಚಿತ ಊಟ, ವಸತಿ ಸೌಲಭ್ಯ ನೀಡಿದರಲ್ಲದೆ ಅವರಿಗೆ ಉದ್ಯೋಗ ತರಬೇತಿ ನೀಡಿ ಸ್ವಾವಲಂಬಿಗಳಾಗಿ, ಗೌರವವಾದ ಜೀವನ ನಡೆಸಲು ನೆರವಾಯಿತು. ಶಕ್ತಿ ಧಾಮ ಅಷ್ಟಕ್ಕೇ ತನ್ನ ಕಾರ್ಯ ಸೀಮಿತಗೊಳಿಸಲಿಲ್ಲ. ನಾನಾ ಕಾರಣಗಳಿಂದ, ಗೃಹ ಹಿಂಸೆಗಳಿಂದ ಮನೆ ತೊರೆದ ಹೆಣ್ಣುಮಕ್ಕಳು ತಪ್ಪು ಹಾದಿ ಹಿಡಿಯದಂತೆ, ಅವರಿಗೆ ತಾತ್ಕಾಲಿಕ ಉಚಿತ ವಸತಿ, ಊಟ, ತರಬೇತಿ ಒದಗಿಸಿ ಅವರನ್ನು ಸ್ವಾವಲಂಬಿ ಹಾಗೂ ಸದೃಢರನ್ನಾಗಿ ಮಾಡಿತು. ಇಂದಿಗೂ ಮಾಡುತ್ತಿದೆ. ತುಮಕೂರು ಜಿಲ್ಲೆಯ ಸರಗೂರಿನ ಪುಷ್ಪ ಮನೆ ಬಿಟ್ಟು ಮೈಸೂರಿಗೆ ಬಂದಾಗ ಪೋಲಿಸರ ಸಲಹೆಯ ಮೇರೆಗೆ ಶಕ್ತಿ ಧಾಮಕ್ಕೆ ಬಂದು, ಉಜ್ವಲ ಭವಿಷ್ಯ ರೂಪಿಸಿಕೊಂಡವರು. ನರ್ಸಿಂಗ್ ಮಾಡಿ ದೇಶ , ವಿದೇಶಗಳಲ್ಲಿ ಕೆಲಸ ಮಾಡಿ, ತನ್ನ ತಮ್ಮ, ತಂಗಿಯರಿಗೆ ಜೀವನ ಕಟ್ಟಿಕೊಟ್ಟು , ಈಗ ಸುಖೀ ಜೀವನ ನಡೆಸುತ್ತಿದ್ದು, ಆಕೆ ಇಂದಿಗೂ ಡಾ. ರಾಜ್ ಅವರ ಕುಟುಂಬಕ್ಕೆ ತಾನು ಚಿರ ಋಣಿಯೆಂದು ಹೃದಯ ಪೂರ್ವಕವಾಗಿ ಹೇಳುವ ಮಾತೊಂದು ಅಣ್ಣಾವ್ರ ಮಾನವೀಯತೆಗೆ ಸಾಕ್ಷಿಯಾಗಿದೆ.

ಇದುವರೆವಿಗೆ ಸುಮಾರು ಏಳು ಸಾವಿರ ಮಹಿಳೆಯರಿಗೆ ಶಕ್ತಿ ಧಾಮ ಜೀವನ ಕಲ್ಪಿಸಿದೆ. ಡಾ.ರಾಜ್ ಅವರ ನಂತರ ಅವರ ಮಕ್ಕಳು ಕೂಡಾ ತಮ್ಮ ತಂದೆಯವರ ಕನಸಿನ ಕೂಸಿನ ನಿರ್ವಹಣೆಗೆ ಲಕ್ಷಾಂತರ ಹಣ ಖರ್ಚು ಮಾಡುತ್ತಿದ್ದಾರೆ. ಇಂತಹ ಸಹೃದಯವಂತರು ದೊಡ್ಮನೆ ಮಕ್ಕಳು ಮಾತ್ರ ಎಂದರೆ ಅತಿಶಯೋಕ್ತಿ ಏನಲ್ಲ. ಈಗ ಶಕ್ತಿ ಧಾಮ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ರಾಜ್ಯದಲ್ಲಿ ಬಡಕುಟುಂಬಗಳ , ಪ್ರತಿಭಾವಂತ ಹೆಣ್ಣುಮಕ್ಕಳನ್ನು ಗುರುತಿಸಿ, ಕರೆತಂದು, ಅವರಿಗೆ ಆಶ್ರಯ ನೀಡಿ, ಶಿಕ್ಷಣ, ವಸತಿ ಎಲ್ಲಾ ಸೌಲಭ್ಯಗಳನ್ನು ನೀಡುತ್ತಾ, ಆ ಹೆಣ್ಣುಮಕ್ಕಳ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕುತ್ತಿದೆ. ಶಕ್ತಿ ಧಾಮ ನೊಂದ ಮಹಿಳೆಯರ ಚೈತನ್ಯ ಧಾಮವಾಗಿದೆ. ಅಣ್ಣಾವ್ರು ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲ ಆದರೆ ಶಕ್ತಿ ಧಾಮದಿಂದ ಜೀವನ ರೂಪಿಸಿಕೊಂಡ ಅನೇಕ ಹೆಣ್ಣುಮಕ್ಕಳ ಕಣ್ಣಿನ ಕಾಂತಿಯಲ್ಲಿ, ಅವರ ನಗುವಿನಲ್ಲಿ, ಅವರ ಸಾಧನೆಯಲ್ಲಿ ಹಾಗೂ ಸುಖೀ ಜೀವನದ ಅವರ ಸಂತೋಷದಲ್ಲಿ ಇದ್ದಾರೆ. *ನಿಜವಾಗಿಯೂ ಶಕ್ತಿ ಧಾಮ ಕೇವಲ ಒಂದು ಸಂಸ್ಥೆಯಲ್ಲ. ಅದು ಡಾ.ರಾಜ್ ಕುಮಾರ್ ಹಾಗೂ ಅವರ ಕುಟುಂಬದವರ ಉದಾರ ಹಾಗೂ ಮಾನವೀಯ ಗುಣದ ಒಂದು ನಿದರ್ಶನವಷ್ಟೆ.*

✍ ಇದು ಸಂಗ್ರಹಿಸಲಾದ ಮಾಹಿತಿ. ಓದಿ. ಹಂಚಿಕೆ ಮಾಡಿ ಸ್ವಾಭಿಮಾನಿ ಕನ್ನಡಿಗರೇ......

*ಬ. ನಾ. ಮು. ರಾಜು*
ವಿಶ್ವಮಾನವ ಡಾ||ರಾಜ್ ಕುಮಾರ್ ಸೇವಾ ಸಮಿತಿ (ನೋಂ)
 
Top